ಟೈವಾನ್
ಪೂರ್ವ ಏಷ್ಯದ ಒಂದು ದ್ವೀಪ. ಚೀನದ ಆಗ್ನೇಯಕ್ಕೆ ಸು.121 ಮೈ. ದೂರದಲ್ಲಿದೆ ಸ್ಥೂಲವಾಗಿ ತಂಬಾಕು ಎಲೆಯ ಆಕಾರದಲ್ಲಿರುವ ಈ ದ್ವೀಪದ ಗರಿಷ್ಠ ಉದ್ದ 242 ಮೈ., ಅಗಲ 87ಮೈ., ವಿಸ್ತೀರ್ಣ 13,887ಚ.ಮೈ., ಜನಸಂಖ್ಯೆ 1,48,10,929  (1971). ಪಶ್ಚಿಮದಲ್ಲಿ ಟೈವಾನ್ ಜಲಸಂಧಿ, ಪೂರ್ವದಲ್ಲಿ ಪೆಸಿಫಿಕ್ ಸಾಗರ, ದಕ್ಷಿಣದಲ್ಲಿ ಬಾಷೀ ಕಡಲ್ಗಾಲುವೆ. ಉತ್ತರದಲ್ಲಿ ಪೂರ್ವ ಚೀನ ಸಮುದ್ರಗಳಿವೆ. ಇದನ್ನು ಫಾರ್ಮೋಸ ಎಂದೂ ಕರೆಯುತ್ತಾರೆ. ದೇಶದ ಆಡಳಿತಕೇಂದ್ರ ಟೈ-ಪೇ.

	ಟೈವಾನ್ ದ್ವೀಪ ಸಮುದ್ರದಲ್ಲಿ ಮುಳುಗಿರುವ ಪರ್ವತಶ್ರೇಣಿಗಳ ಒಂದು ಭಾಗ. ಆದ್ದರಿಂದ ಅನೇಕ ಕಡೆ ಭೂಸ್ತರಗಳು ಛಿದ್ರಗೊಂಡಿವೆ. ದ್ವೀಪದಲ್ಲಿ ಪ್ರಧಾನವಾಗಿ ಮೂರು ಪರ್ವತಶ್ರೇಣಿಗಳು ಹಬ್ಬಿವೆ. ದ್ವೀಪದ ಮಧ್ಯಭಾಗ ಪರ್ವತಪ್ರದೇಶ. ಇಲ್ಲಿಯ ಪರ್ವತಗಳ ಸರಾಸರಿ ಎತ್ತರ ಸಮುದ್ರಮಟ್ಟಕ್ಕೆ 10,000'. ಯೂಷಾನ್ (13,113') ಹಾಗೂ ಜೂóಗೌ ಷಾನ್ (12,897') ಮುಖ್ಯ ಶಿಖರಗಳು. 10,000'ಗಿಂತ ಎತ್ತರವಾದ ಶಿಖರಗಳು 70ಕ್ಕೂ ಹೆಚ್ಚಾಗಿವೆ. ಈ ಪರ್ವತಗಳ ಪೂರ್ವಕ್ಕೆ ವಿಶಾಲವಾದ ಕಣಿವೆ ಇದೆ. ಕಣೆವೆಯ ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಕರಾವಳಿಯುಂಟು. ಪೂರ್ವ ಕಡಲಂಚಿನ ಅಗ್ನಿ ಪರ್ವತಗಳ ಎತ್ತರ ಸು. 7,000'. ಪಶ್ಚಿಮ ತೀರ ಅಂಕುಡೊಂಕಾಗಿದ್ದು ಅನೇಕ ನೈಸರ್ಗಿಕ ಬಂದರುಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಪೂರ್ವತೀರದಲ್ಲಿ ಪರ್ವತಗಳ ಏರು ತೀವ್ರವಾಗಿರುವುದರಿಂದ ಬಂದರುಗಳು ಕಡಿಮೆ. ದ್ವೀಪದಲ್ಲಿ ಭೂಕಂಪಗಳು ಸಾಮಾನ್ಯ, ಆದರೆ ತೀವ್ರವಲ್ಲ. ನದಿಗಳು ತೀರ ಕಿರಿಯವು.

	ಸುತ್ತಲಿನ ಸಮುದ್ರ ಹಾಗೂ ಸಾಗರಪ್ರವಾಹಗಳಿಂದಾಗಿ ಇಲ್ಲಿಯದು ಸಾಮಾನ್ಯವಾಗಿ ಹಿತಕಾರವಾದ ಬೆಚ್ಚಗಿನ ವಾಯುಗುಣ. ಸರಾಸರಿ ಉಷ್ಣತೆ ಬೇಸಗೆಯಲ್ಲಿ 800-900 ಈ, ಚಳಿಗಾಲದಲ್ಲಿ 500-600 ಈ. ದ್ವೀಪದ ಮಧ್ಯದಲ್ಲಿರುವ ಪರ್ವತಪ್ರದೇಶ ಚಳಿಗಾಲದಲ್ಲಿ ಹಿಮಚ್ಛಾದಿತವಾಗಿರುತ್ತದೆ. ಬಯಲು ಪ್ರದೇಶದಲ್ಲಿ ಸರಾಸರಿ ವಾರ್ಷಿಕ ಮಳೆ 40. ಪರ್ವತಪ್ರದೇಶದಲ್ಲಿ 200. ಕೆಲವು ಕಡೆ ಋತುಕಾಲಿಕ ಬಿರಗಾಳಿ ಬೀಸಿ ಪೈರಿಗೆ ನಷ್ಟ ಉಂಟು ಮಾಡುತ್ತದೆ.

	ದ್ವೀಪದ ಬಹುಭಾಗ ಅರಣ್ಯ. ಸಮುದ್ರಮಟ್ಟಕ್ಕೆ ಸು.9,000 ಎತ್ತರದ ಪ್ರದೇಶಗಳಲ್ಲಿ ಶಂಕುಧಾರಿ ಮರಗಳು ಬೆಳೆಯುತ್ತವೆ. ಸು. 6,500 ಎತ್ತರದ ಪ್ರದೇಶಗಳಲ್ಲಿ ದೇವದಾರು. ಸೈಪ್ರಸ್, ಜೂನಿಯರ್, ಮೇಪಲ್ ಮುಂತಾದ ಗಿಡಗಳು ಬೆಳೆಯುತ್ತವೆ. ಕರ್ಪೂರದ ಗಿಡಗಳೂ ಇಲ್ಲಿ ಅಧಿಕ. ತಗ್ಗು ಭೂಮಿಯಲ್ಲಿ ಬಿದಿರು, ನಿತ್ಯಹರಿದ್ವರ್ಣದ ವೃಕ್ಷಗಳು ಹಾಗೂ ತೆಂಗು ಜಾತಿಯ ಮರಗಳು ಹೆಚ್ಚಾಗಿ ಬೆಳೆಯುತ್ತವೆ. ಹುಲಿ. ಚಿರತೆ. ಕಾಡುಹಂದಿ, ಕಾಡುಮೇಕೆ, ಚಿಗರಿ, ಮೊಲ ಮುಂತಾದ ಪ್ರಾಣಿಗಳು ಇಲ್ಲಿವೆ. ಮಡಿವಾಳ, ಕೊಕ್ಕರೆ ಮೊದಲಾದುವು ಇಲ್ಲಿಯ ಪಕ್ಷಿಗಳು. ಎಮ್ಮೆಯನ್ನು ಹೇರುಪ್ರಾಣಿಯಾಗಿ ಬಳಸುತ್ತಾರೆ.

	ಇಲ್ಲಿಯ ಜನ ಬಹುತೇಕ ಚೀನೀ ಬುಡಕಟ್ಟಿನವರು. ಒಟ್ಟು ಜನಸಂಖ್ಯೆಯಲ್ಲಿ ಚೀನಿಯರು 90% ; ಇವರು ಚೀನದ ಫೂಕ್ಯನ್ ಹಾಗೂ ಗ್ವಾಂಗ್‍ಡುಂಗ್ ಪ್ರಾಂತ್ಯಗಳಿಂದ ವಲಸೆ ಬಂದವರು. ಇಲ್ಲಿ 7 ಪ್ರಮುಖ ಚೀನಿ ಪ್ರಾಂತೀಯ ಭಾಷೆಗಳಿವೆ. ಮಂಡಾರಿಯನ್ ಚೀನೀ ಭಾಷೆ ಹೆಚ್ಚಾಗಿ ಬಳಕೆಯಲ್ಲಿದೆ. ಕೌಷೀಯಂಗ್, ಜೀಲುಂಗ್, ಟೈನಾನ್, ಟೈಚುಂಗ್-ಇವು ಅಧಿಕ ಜನಸಂಖ್ಯೆಯ ನಗರಗಳು. ಬಹುಪಾಲು ಜನ ಬೌದ್ಧಮತಾವಲಂಬಿಗಳು. ಇಸ್ಲಾಂ ಕ್ಯಾತೊಲಿಕ್, ಪ್ರಾಟೆಸ್ಟಂಟ್, ಕನ್‍ಫ್ಯೂಷಿಯನ್ ಮತಾವಲಂಬಿಗಳೂ ಉಂಟು ಟೈವಾನ್‍ನಲ್ಲಿ 2,175 ಪ್ರಾಥಮಿಕ ಹಾಗೂ 593 ಸೆಕೆಂಡರಿ ಶಾಲೆಗಳೂ 9 ವಿಶ್ವವಿದ್ಯಾಲಯಗಳೂ ಇವೆ.

	ಬತ್ತ ಇಲ್ಲಿಯ ಮುಖ್ಯ ಬೆಳೆ, ಗೆಣಸು, ನೆಲಗಡಲೆ, ಸೋಯಾಬೀನ್ಸ್, ಬಾರ್ಲಿ, ಗೋದಿ, ಕಬ್ಬು, ಸಣಬು, ಹೊಗೆಸೊಪ್ಪು, ನಿಂಬೆಜಾತಿಯ ಹಣ್ಣುಗಳು, ಚಹ, ಅನಾನಸ್, ಹತ್ತಿ-ಇವು ಇತರ ಪ್ರಮುಖ ಬೆಳೆಗಳು, ಪ್ರಪಂಚದ ಒಟ್ಟು ಕರ್ಪೂರದಲ್ಲಿ ಅರ್ಧದಷ್ಟು ಭಾಗ ಟೈವಾನಿನಲ್ಲಿ ಉತ್ಪನ್ನವಾಗುತ್ತದೆ. ಕುರಿಸಾಕಣೆ ಹಾಗೂ ಪಶುಪಾಲನೆಯೂ ಉಂಟು, ಸಮುದ್ರದಂಚಿನಲ್ಲಿ ಮೀನುಗಾರಿಕೆ ತುಂಬ ಪ್ರಮುಖ ಚಟುವಟಿಕೆ.

	ಗಂಧಕ, ಉಪ್ಪು, ಕರ್ಪೂರ, ಹತ್ತಿಬಟ್ಟೆ, ರಾಸಾಯನಿಕ ವಸ್ತುಗಳು, ಗಾಜಿನ ಸಾಮಾನು, ಸಿಮೆಂಟು, ವಿದ್ಯುತ್ ಉಪಕರಣ-ಇವು ಇಲ್ಲಿಯ ಮುಖ್ಯ ಕೈಗಾರಿಕೆಗಳು, ಕಲ್ಲಿದ್ದಲು, ಗಂಧಕ, ಉಪ್ಪು, ಪಟ್ರೋಲ್: ನದಿಗಳ ಎರೆಮಣ್ಣಿನಲ್ಲಿ ಕಿರುಪ್ರಮಾಣದಲ್ಲಿ ಚಿನ್ನ-ಇವು ಖನಿಜೋತ್ಪನ್ನಗಳು.

	ಇತಿಹಾಸ : ಟೈವಾನ್ ದ್ವೀಪದ ಇರವು 7ನೆಯ ಶತಮಾನದಲ್ಲಿ ಚೀನೀಯರಿಗೆ ತಿಳಿದಿತ್ತು. 16ನೆಯ ಶತಮಾನದ ಚೀನೀ ಇತಿಹಾಸಗ್ರಂಥಗಳಲ್ಲಿ ಟೈವಾನ್ ಪದದ ಬಳಕೆ ಕಂಡುಬಂದಿದೆ. 1590ರಲ್ಲಿ ಈ ದ್ವೀಪವನ್ನು ಮುಟ್ಟಿದ ಪೋರ್ಚುಗೀಸರು ಇದರ ಸೊಬಗನ್ನು ಕಂಡು ಇದನ್ನು ಫಾರ್ಮೋಸ (ಸುಂದರ) ಎಂದು ಕರೆದರು. 17ನೆಯ ಶತಮಾನದಲ್ಲಿ ಚೀನೀಯರು ಇಲ್ಲಿಗೆ ಬಂದು ನೆಲಸಿದರು. 1624ರಲ್ಲಿ ಇಲ್ಲಿ ಡಚ್ಚರು ಕೋಟೆಗಳನ್ನು ಕಟ್ಟಿದರು. 1626ರ ಹೊತ್ತಿಗೆ ಉತ್ತರ ಭಾಗದಲ್ಲಿ ಸ್ಪೇನಿಗರೂ ಕೆಲವು ಕೋಟೆಗಳನ್ನು ಕಟ್ಟಿದರು, 1646ರ ಸುಮಾರಿಗೆ ಸ್ಪೇನಿಗರ ಕೋಟೆಗಳನ್ನೆಲ್ಲ ಡಚ್ಚರು ವಶಪಡಿಸಿಕೊಂಡು ಸ್ಪೇನಿಗರು ಅಲ್ಲಿಂದ ಕಾಲು ಕೀಳುವಂತೆ ಮಾಡಿದರು. ಆದರೆ 1662ರ ಸುಮಾರಿಗೆ ಚೀನೀ ದಂಡನಾಯಕ ಚೆಂಗ್-ಕುಂಗ್ (ಕೊ ಲಿಂಗ) ಡಚ್ಚರನ್ನು ಈ ದ್ವೀಪದಿಂದ ಓಡಿಸಿದ. 1684ರ ಹೊತ್ತಿಗೆ ಟೈವಾನ್ ಮಾಂಚೂ ಅರಸರ ವಶವಾಗಿ ಚೀನದ ಫೂಕ್ರ್ಸೆನ್ ಪ್ರಾಂತ್ಯದ ಭಾಗವಾಯಿತು. ಟಿನ್‍ಟ್ಸಿಂಗ್ ಒಪ್ಪಂದದ ಪ್ರಕಾರ ದ್ವೀಪದಲ್ಲಿ ಐರೋಪ್ಯರ ವ್ಯಾಪಾರ ಹಾಗೂ ಮತಪ್ರಚಾರಕ್ಕೆ ಅವಕಾಶವಾಯಿತು (1858).  1871ರ ಚೀನ-ಜಪಾನ್ ಒಪ್ಪಂದವನ್ನು ಉಲ್ಲಂಘಿಸಿ 1874ರಲ್ಲಿ ಜಪಾನಿನ ಸೈನ್ಯ ಟೈವಾನ್ ದ್ವೀಪವನ್ನು ಆಕ್ರಮಿಸಿ, ಪೀಕಿಂಗಿನಲ್ಲಿದ್ದ ಸರ್ ಥಾಮಸ್ ವೇಡ್ ಎಂಬಾತನ ಮಧ್ಯಸ್ಥಿಕೆಯಿಂದ ವಾಪಸಾಯಿತು. ಚೀನ-ಫ್ರಾನ್ಸ್ ಯುದ್ಧಕಾಲದಲ್ಲಿ (1884-85) ಚೀಲುಂಗ್ ಬಂದರು ಕೆಲವು ತಿಂಗಳುಗಳ ಕಾಲ ಫ್ರೆಂಚರ ವಶದಲ್ಲಿತ್ತು. 1886ರಲ್ಲಿ ಈ ದ್ವೀಪ ಚೀನೀ ಸಾಮ್ರಾಜ್ಯದ ಒಂದು ಪ್ರಾಂತ್ಯವಾಯಿತು. 1894-95ರ ಚೀನ-ಜಪಾನ್ ಯುದ್ಧದಲ್ಲಿ ಜಪಾನ್ ಮತ್ತೆ ದ್ವೀಪವನ್ನು ಆಕ್ರಮಿಸಿತು ; ಷಿಮನೋಸಕೀ ಕೌಲಿನಿಂದ (1895), ಚೀನ ಇದನ್ನು ಜಪಾನಿಗೆ ಒಪ್ಪಿಸಿತು. ಆದರೆ ಇಲ್ಲಿಯ ಜನ ಚೀನೀ ಮೂಲನಾಡಿನಿಂದ ಪ್ರತ್ಯೇಕಗೊಳ್ಳಲು ಇಷ್ಟವಿಲ್ಲದೆ 10 ವರ್ಷಗಳಲ್ಲಿ 13 ಬಾರಿ ದಂಗೆಯೆದ್ದರು.

	ಎರಡನೆಯ ಮಹಾಯುದ್ಧಕಾಲದಲ್ಲಿ ಟೈವಾನ್ ಜಪಾನಿನ ಅತ್ಯಂತ ಪ್ರಬಲ ಸೈನಿಕ ನೆಲೆಯಾಗಿತ್ತು. ಚೀನ ಮತ್ತು ಆಗ್ನೇಯ ಏಷ್ಯ ಪ್ರದೇಶಗಳ ಮೇಲೆ ದಾಳಿ ನಡೆಸಲು ಜಪಾನ್ ಇದನ್ನು ಬಹುವಾಗಿ ಬಳಸಿತು. ಈ ಕಾಲದಲ್ಲಿ ಟೈವಾನ್ ಅಮೆರಿಕದ ಬಾಂಬ್ ದಾಳಿಗೆ ಗುರಿಯಾಯಿತು. ಕೈರೊ ಕೌಲಿನ ಪ್ರಕಾರ (1943) ಬ್ರಿಟನ್ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳು ದ್ವೀಪವನ್ನು ಚೀನಕ್ಕೆ ಒಪ್ಪಿಸಿದುವು (1945). ಚೀನೀ ಮೂಲಾನಾಡಿನಲ್ಲಿ ಕಮ್ಯೂನಿಸ್ಟರು ಪ್ರಬಲರಾಗಲು, ರಾಷ್ಟ್ರೀಯ ಪಕ್ಷದ ನಾಯಕ ಚಿಯಾಂಗ್ ಕೈ-ಷೇಕ್ ಟೈವಾನಿನ ಬಂದು ಅಲ್ಲಿ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಿದ (1949). ಟೈವಾನ್ ಹಾಗೂ ಅಮೆರಿಕ ಸಂಯುಕ್ತಸಂಸ್ಥಾನಗಳ ನಡುವೆ ಪರಸ್ಪರ ಭದ್ರತೆಯ ಬಗ್ಗೆ 1954ರಲ್ಲಿ ಒಂದು ಒಪ್ಪಂದವಾಯಿತು. ತಾನೇ ಬೃಹತ್ ಚೀನದ ನ್ಯಾಯಬದ್ಧ ಸರ್ಕಾರವೆಂಬುದು ಟೈವಾನ್ ರಾಷ್ಟ್ರೀಯ ಸರ್ಕಾರದ ಅಭಿಮತ. 1971ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಟೈವಾನ್ ತನ್ನ ಸ್ಥಾನವನ್ನು ಕಳೆದುಕೊಂಡಿತು.

	ಸರ್ಕಾರ : ರಾಜ್ಯದ ಅಧಿಪತಿ ಅಧ್ಯಕ್ಷ.  ಅವನನ್ನು ಆರು ವರ್ಷಗಳ ಅವಧಿಗೆ ರಾಷ್ಟ್ರೀಯ ಸಭೆ ಚುನಾಯಿಸುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಐದು ಯುವಾನ್‍ಗಳು ಅಥವಾ ಅಂಗಗಳಿವೆ. ಅತ್ಯುನ್ನತ ಶಾಸಕಾಂಗಕ್ಕೆ ಕಾರ್ಯಾಂಗಹೊಣೆ. ಇವಲ್ಲದೆ ನಿಯಂತ್ರಣ, ನ್ಯಾಯ ಮತ್ತು ಪರೀಕ್ಷಣಾಂಗಗಳಿವೆ. ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಚುನಾವಣೆ ನಡೆಯುತ್ತದೆ. ಆದರೆ ರಾಷ್ಟ್ರೀಯ ಸಭೆಯ ಬಹುತೇಕ ಸ್ಥಾನಗಳಲ್ಲಿ ಚೀನಿ ಮೂಲನಾಡಿನ ಚುನಾವಣಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದವರು ಅಜೀವಸದಸ್ಯರಾಗಿ ಉಳಿದುಕೊಂಡಿದ್ದಾರೆ.
											        (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ